Promoting science learning at school level... An unique initiative by the university 

ಶಾಲೆಯಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರವನ್ನು ಕುರಿತು

ಮಾನ್ಯ ಕುಲಪತಿಗಳು

ವಿಶ್ವವಿದ್ಯಾನಿಲಯಗಳು ಮಾನವ ಸಂಪನ್ಮೂಲ ಅಭಿವೃದ್ಧಿಯ ಬೃಹತ್ ಕೇಂದ್ರಗಳು. ಒಂದು ವಿಶ್ವವಿದ್ಯಾನಿಲಯವು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ವಿವಿಧ  ಜ್ಞಾನ ಶಿಸ್ತೀಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಬೋಧನಾ-ಕಲಿಕಾ ಕೇಂದ್ರಗಳಾಗಿರುವುದು ಅದರ ಒಂದು  ಪ್ರಮುಖ ಜವಾಬ್ದಾರಿಯಾಗಿದೆ. ವಿಶ್ವವಿದ್ಯಾನಿಲಯದ ಬೋಧಕ ವರ್ಗವು ತನ್ನ ನಾವೀನ್ಯ ಸಂಶೋಧನೆಗಳಿಂದ  ಪ್ರಚಲಿತ ಸಂಗತಿಗಳಲ್ಲಿ ನೂತನ ಜ್ಞಾನ ಸೃಷ್ಠಿಮಾಡುವ ಕೇಂದ್ರಗಳಾಗಿವೆ. ಬೋಧನೆ ಮತ್ತು ಸಂಶೋಧನೆಗಳ ಜೊತೆಗೆ ಸಮಾಜಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಯೋಜಿಸುವ ಜವಾಬ್ದಾರಿಯೂ  ವಿಶ್ವವಿದ್ಯಾನಿಲಯಗಳ ಮೇಲಿದೆ. ಸಮಾಜದ ಉಪಯೋಗಕ್ಕೆ ತಲುಪುವಂತೆ ಮಾಡಲು ಸೂಕ್ತ ಕಾರ್ಯಕ್ರಮಗಳನ್ನು  ರೂಪಿಸುವ ಗುರುತರ ಜವಾಬ್ದಾರಿಯು ವಿಶ್ವವಿದ್ಯಾನಿಲಯಗಳಲ್ಲಿರುವ ಶಿಕ್ಷಕರು ಮತ್ತು  ಆಡಳಿತಾರೂಢವ್ಯಕ್ತಿಗಳು ಮಾಡುವ ನವೀನ ಆಲೋಚನೆಗಳನ್ನ ಅವಲಂಬಿಸಿರುತ್ತದೆ. ವಿಶ್ವವಿದ್ಯಾನಿಲಯದ  ಕಾರ್ಯಗಳಾದ ಬೋಧನೆ ಮತ್ತು ಸಂಶೋಧನೆಗಳ ಜೊತೆಗೆ ಇದನ್ನು ಮೂರನೆ ಆಯಾಮವಾದ ವಿಸ್ತರಣಾ ಕಾರ್ಯವೆಂದು ಕರೆಯುತ್ತೇವೆ. 

ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ರಂಗದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡಿರುವ ಹಾಗೂ ಕೆಲವು ವರ್ಷಗಳ ಹಿಂದೆ ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯವು ಯಾವಾಗಲೂ ಈ ಮೂರೂ ಆಯಾಮಗಳಲ್ಲಿ ಅಂದರೆ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಅಂತಹ ಕಾರ್ಯಗಳಲ್ಲೊಂದು ಎಂದರೆ ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ಆಗಿದೆ. ಈ ಅದ್ಭುತ ಕಾರ್ಯವನ್ನು ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿಯನ್ನು (CDSS) ಸ್ಥಾಪಿಸುವುದರ ಮೂಲಕ ಮಾಡಲಾಗುತ್ತಿದೆ. ಸಮಿತಿಯ ಮೂಲಕ 2006 ರಿಂದ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಪ್ರೌಢಶಾಲಾ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ CFTRI & BARC ನಿವೃತ್ತ ವಿಜ್ಞಾನಿಗಳೊಡನೆ ಸಂವಾದ ಮಾಡುವಂತೆ ಏರ್ಪಡಿಸಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ಮತ್ತು ಗಣಿತ ವಿಜ್ಞಾನಗಳ  ಸರಳ ಕಲಿಕೆಗೆ ಅವಕಾಶ ಕಲ್ಪಿಸುತ್ತಾ ಬಂದಿದೆ. ಸದ್ಯದಲ್ಲಿ ಈ ಸಮಿತಿಯು ಓರ್ವ ವಿಶ್ರಾಂತ  ಕುಲಪತಿಗಳ ಅಧ್ಯಕ್ಷತೆಯಲ್ಲಿ ಕೆಲಸ ನಿರ್ವಹಿಸುತ್ತಲಿದ್ದು ಕಾರ್ಯಕ್ರಮಗಳು ವೈವಿಧ್ಯಮಯವಾಗಿ  ಜರುಗತ್ತಲಿವೆ. ಮೈಸೂರು ವಿಶ್ವವಿದ್ಯಾನಿಲಯವು ಪ್ರಾರಂಭಿಸಿರುವ ಈ ವಿಶಿಷ್ಟ ಕಾರ್ಯಕ್ರಮವು  ಕರ್ಣಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ  ಮೊದಲನೆಯದಾಗಿದೆ.

ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿಯ (CDSS) ಕಾರ್ಯಕ್ರಮಗಳನ್ನು ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸಲು ಮತ್ತು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಉದ್ಧೇಶದಿಂದ ಈಗ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರವನ್ನು (CSES) ಸ್ಥಾಪಿಸಲಾಗಿದೆ. CSES ತನ್ನದೇ ಒಂದು ಜಾಲವನ್ನು ಸ್ಥಾಪಿಸುತ್ತಾ ಅದರ ಮೂಲಕ ವಿವಿಧ ವಿಷಯಗಳ ಪ್ರಶ್ನೆಗಳಿಗೆ  ಇಂಗ್ಲಿಷ್ ಮತ್ತು ಕನ್ನಡ ದಲ್ಲಿ ಅತ್ಯುತ್ತಮ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಬರೆಯಿಸಿದ ಉತ್ತರಗಳನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಿ ಅವರು ಭವಿಷ್ಯದಲ್ಲಿ ವಿಜ್ಞಾನದ  ಉತ್ತಮ ವಿದ್ಯಾರ್ಥಿಗಳಾಗುವಂತೆ ಮಾಡುವ ಯೋಜನೆ ತಿಳಿದು ಬಹಳ ಸಂತೋಷವಾಗಿದೆ. ಉತ್ತರಗಳು ಇಂಗ್ಲಿಷ್  ಭಾಷೆಯಲ್ಲೂ ಇರುವ ಕಾರಣ ಇದು ಇಡೀರಾಜ್ಯ ವ್ಯಾಪ್ತಿ ಹಾಗೂ ಇತರ ವಿದ್ಯಾರ್ಥಿಗಳಿಗೂ  ಅನುಕೂಲಕರವಾಗಲಿದೆ.

“ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿಸಮಿತಿ” ಯ ಸದಸ್ಯರುಗಳನ್ನು ಇಂತಹ ಉತ್ತಮ ಕಾರ್ಯಯೋಜನೆಗಾಗಿ  ಅಭಿನಂದಿಸುವುದರ ಜತೆಗೆ ಅವರ ಮುಂದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲೆಂದು  ಹಾರೈಸುತ್ತೇನೆ.

ಮಾನ್ಯ ಅಧ್ಯಕ್ಷರು

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಪ್ರಧಾನ ಆವರಣವಾದ  ಮಾನಸ ಗಂಗೋತ್ರಿಯು ವಿಜ್ಞಾನ, ಸಮಾಜವಿಜ್ಞಾನ ಹಾಗೂ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ  ಹಾಗೂ ಸಂಶೋಧನೆಗಳು ಜರುಗುತ್ತಿರುವ ಪೀಠವಾಗಿದೆ. ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆ  ಕಾರ್ಯಗಳಿಗೆ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಬರಬೇಕಾದಲ್ಲಿ ಕೆಳಹಂತದಲ್ಲಿ ವ್ಯಾಸಂಗ  ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸೂಕ್ತವಾಗಿ ಉನ್ನತ ಅಧ್ಯಯನಕ್ಕೆ ಪ್ರೇರೇಪಣೆಗೊಳಿಸಬೇಕಾದದ್ದು  ಅವಶ್ಯಕ. ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳಿಗೆ ಉತ್ತಮ ವಿದ್ಯಾರ್ಥಿಗಳನ್ನು ಆಕರ್ಷಿಸುವ  ಸಲುವಾಗಿ ಮೈಸೂರು ವಿಶ್ವವಿದ್ಯಾನಿಲಯವು 2006 ರಿಂದ ಒಂದು ವಿಶಿಷ್ಟ ರೀತಿಯ ಉಪಯುಕ್ತ ಸಮಾಜಮುಖಿ  ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಮೂಲಭೂತ ವೈಜ್ಞಾನಿಕ ಜ್ಞಾನವನ್ನು ಪಡೆಯಲು ಮತ್ತು ಭವಿಷ್ಯದಲ್ಲಿ ವಿಜ್ಞಾನ ಶಿಕ್ಷಣ ಮತ್ತು ವೃತ್ತಿಜೀವನವನ್ನು ಮುಂದುವರಿಸಲು ಪ್ರೌಢ ಶಾಲಾ ಮಟ್ಟದಲ್ಲಿ ಯುವ ಪೀಳಿಗೆಯನ್ನು ಪ್ರೇರೇಪಿಸಲು ಮತ್ತು  ಪ್ರೋತ್ಸಾಹಿಸಲು 2016ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿಯನ್ನು (CDSS) ರಚಿಸಿತು. CDSS ಸಮಿತಿಯು ತನ್ನ ಕಾರ್ಯಕ್ರಮಗಳನ್ನು ಸಮರ್ಥವಾಗಿ ಮತ್ತು ವಿಜ್ಞಾನ ಕಾರ್ಯಕ್ರಮಗಳನ್ನು ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಸ್ತರಿಸಲು ಸಾಧ್ಯವಾಗುವಂತೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರವನ್ನು ಈಗ ಸ್ಥಾಪನೆ ಮಾಡಲಾಗಿದೆ.  ಮೈಸೂರು ವಿಶ್ವವಿದ್ಯಾನಿಲಯವು ರಚಿಸಿರುವ ಶಾಲೆಯಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರವು (CSES)  ಶಾಲಾಮಕ್ಕಳಲ್ಲಿ ವಿಜ್ಞಾನ ಕಲಿಯುವಿಕೆಗೆ ಆಸಕ್ತಿ ವೃದ್ಧಿಸಲು ಅನೇಕ  ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಸದರಿ ಕಾರ್ಯಕ್ರಮವನ್ನು ಪ್ರೌಢಶಾಲಾ ವಿದ್ಯಾರ್ಥಿಗಳನ್ನು  ಕೇಂದ್ರೀಕರಿಸಿ ರೂಪಿಸಲಾಗಿದೆ, ಏಕೆಂದರೆ ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ  ಮಾನಸಿಕ ಪರಿವರ್ತನಾ ಘಟ್ಟದಲ್ಲಿರುತ್ತಾರೆ. ಈ ಯೋಜನೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ  ವಿಭಾಗದ ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಪ್ರಾಧ್ಯಾಪಕರುಗಳುಮತ್ತು CFTRI & BARC ಯ ನಿವೃತ್ತ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯ ಮಾಡುತ್ತಲಿದ್ದಾರೆ. ಸದರಿ ಯೋಜನೆಯು ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ಕಲಿಕೆಗೆ ಪ್ರೋತ್ಸಾಹ ನೀಡುತ್ತಾ ಈ ವಿಷಯಗಳ ಕಲಿಕೆ ಕಷ್ಟವೆಂಬ ತಪ್ಪು ಗ್ರಹಿಕೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದೆ. ಇದರ ಜೊತೆಗೆ ಶಾಲಾ ಶಿಕ್ಷಕರನ್ನು ಶೈಕ್ಷಣಿಕವಾಗಿ ಸಮರ್ಥಗೊಳಿಸುವುದಕ್ಕೆ ಕಾರ್ಯಕ್ರಮ ರೂಪಿಸುವುದಲ್ಲದೆ ಅವರು ತಮ್ಮ ತಮ್ಮ ಶಾಲೆ ಗಳಲ್ಲಿರುವ ಪ್ರತಿಭಾವಂತ  ವಿದ್ಯಾರ್ಥಿಗಳನ್ನು ಗುರತಿಸಿ ಪ್ರೋತ್ಸಾಹಿಸುವಂತೆ ಮಾಡಲು ಪ್ರೇರೇಪಿಸುತ್ತಿದೆ. CSES ಸಮಿತಿಯು ಪರಿಣಿತರಿಂದ ಉಪನ್ಯಾಸಗಳನ್ನು ಕೊಡಿಸುವುದರ ಮೂಲಕ ಹಾಗೂ ಪರಿಣಿತರೊಡನೆ ವಿಜ್ಞಾನ ವಿಷಯಗಳಲ್ಲಿ ಸಂವಾದ ಏರ್ಪಡಿಸುವುದರ ಮೂಲಕ ಶಾಲಾಮಕ್ಕಳು ವಿಜ್ಞಾನ ಕಲಿಯುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಉದ್ದಿಶ್ಯಕ್ಕಾಗಿ CSES ಹಮ್ಮಿಕೊಂಡಿರುವ ಕಾರ್ಯಕ್ರಮಗಳೆಂದರೆ: ರಜಾ ಅವಧಿಯಲ್ಲಿ ಶಾಲಾಮಕ್ಕಳನ್ನು ಮೈಸೂರಿಗೆ ಕರೆಸಿಕೊಂಡು ಒಂದು ವಾರದ ವಾಸ್ತವ್ಯ ಕಾರ್ಯಕ್ರಮ ಮಾಡುವುದು, ವಿಜ್ಞಾನ ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ, ವಿಜ್ಞಾನ ಮಾದರಿಗಳನ್ನು ತಯಾರಿಸುವ ಸ್ಪರ್ಧೆ ಮತ್ತು ಶಾಲಾ ವಿಜ್ಞಾನ ಶಿಕ್ಷಕರುಗಳಿಗೆ ಮೂರು ದಿನಗಳ ಕಾರ್ಯಾಗಾರವನ್ನು ಪ್ರತೀ ವರ್ಷ ಏರ್ಪಾಟುಮಾಡಲಾಗುತ್ತಿದೆ. ಸಂವಾದ ಕಾರ್ಯ ಕ್ರಮದಲ್ಲಿ ಕೇಳಿದ ಉತ್ತಮ ಪ್ರಶ್ನೆಗಳನ್ನು ಆಯ್ಕೆಮಾಡಿ ಆ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳನ್ನು ಮೈಸೂರಿಗೆ ಕರೆಸಿ ಒಂದು ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಿ ಅದನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ 2020ರ ಫೆಬ್ರವರಿ ಮಾಹೆಯಲ್ಲಿ ಚಿತ್ರೀಕರಿಸಿ ಇದೇ ಮಾರ್ಚ್ ಮಾಹೆಯಲ್ಲಿ ದೂರದರ್ಶನದಲ್ಲಿ ಪ್ರಸಾರಗೊಳಿಸಲಾಯಿತು.

CSES ಸಮಿತಿಯು ತನ್ನದೇ ಆದ ಒಂದು Website ನ್ನು ಅಂತರಜಾಲದಲ್ಲಿ ಸ್ಥಾಪಿಸಿ ವಿದ್ಯಾರ್ಥಿಗಳು ಕೇಳಿರುವ ಪ್ರಶ್ನೆಗಳಿಗೆ ಪರಿಣಿತರಿಂದ ಉತ್ತರಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯಿಸಿ Website ನಲ್ಲಿ ಸಿಗುವಂತೆ ಮಾಡಿದರೆ ಕರ್ನಾಟಕ ರಾಜ್ಯದ ಎಲ್ಲಾ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು. ಇದು ಎಲ್ಲರಿಗೂ ಉಚಿತವಾಗಿ ಸಿಗುವುದು. ಶಾಲಾ ಶಿಕ್ಷಕರೊಡನೆ ಚರ್ಚಿಸಿ ಅವರ ಬೋಧನೆಗೆ ಉಪಯುಕ್ತವಾಗುವ ಕಲಿಕಾ ವಿಷಯಗಳಮೇಲೂ ಟಿಪ್ಪಣಿ ಬರೆಯಿಸಿ Website ನಲ್ಲಿ (ಅಂತರಜಾಲದಲ್ಲಿ) ಲಭ್ಯವಾಗುವಂತೆ ಮಾಡಲಾಗುವುದು.

ಇವೆಲ್ಲವುಗಳ ಜೊತೆಗೆ ಕೆಲವು ಉಪಯುಕ್ತ ವೀಡಿಯೋಗಳು Website ನಲ್ಲಿ (ಅಂತರ ಜಾಲದಲ್ಲಿ) ಸಿಗುವಂತೆ ಮಾಡಿದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗೆ ಅನುಕೂವಾಗುವುದು. ಮೈಸೂರು ವಿಶ್ವವಿದ್ಯಾನಿಲಯವು CSES ಮೂಲಕ ಪ್ರಾರಂಭಮಾಡಿರುವ ಈ ವಿಶಿಷ್ಟ ಯೋಜನೆಯ ಉಪಯೋಗವನ್ನು ಇಡೀ ಕರ್ಣಾಟಕದ ಪ್ರೌಢಶಾಲಾವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಡೆಯುವರೆಂದು ಆಶಿಸುತ್ತೇನೆ.

ಎಲ್ಲರಿಗೂ ನನ್ನ ಶುಭಾಶಯಗಳು.


Location:

ಸಂಪರ್ಕಿಸಿ:

ಪ್ರೊ. ಪಿ. ವೆಂಕಟರಾಮಯ್ಯ

ಅಧ್ಯಕ್ಷರು, ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ, ಮೈಸೂರು ವಿ.ವಿ.

ಮಾನಸ ಗಂಗೋತ್ರಿ, ಮೈಸೂರು.

ವಿಶ್ರಾಂತ ಕುಲಪತಿಗಳು, ಕುವೆಂಪು ವಿಶ್ವವಿದ್ಯಾನಿಲಯ

ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರು,ಮೈಸೂರು ವಿ.ವಿ.

 ಮಾನಸಗಂಗೋತ್ರಿ, ಮೈಸೂರು


Contact:

Prof. P. Venkataramaiah 

Chairman, CSES 

Former Vice-Chancellor of Kuvempu University 

Professor of Physics (Retired) 

University of Mysore

email: pvram004@gmail.com

chairman-cses@uni-mysore.ac.in

office-cses@uni-mysore.ac.in